ಬರೆದು ಮರೆತದ್ದನ್ನು ನನ್ನ ಪುಟ್ಟ ತಂಗಿ ಜೋಪಾನ ಮಾಡಿಟ್ಟು ಇತ್ತೀಚೆಗೆ ನನ್ನ ಗಮನಕ್ಕೆ ತಂದದ್ದು.... ನಾನು ನಿಮಿತ್ತಮಾತ್ರನಾಗಿ ಇಲ್ಲಿಟ್ಟದ್ದು.... ತಾರುಣ್ಯದ ಅಪಕ್ವ ಗೀಚುವಿಕೆ ಅಷ್ಟೇ..... ಓದಿ(ದರೆ) ನಕ್ಕುಬಿಡಿ!
೫ ಜನವರಿ, ೧೯೯೦
ಮುಂಜಾವಿನಲ್ಲಿ ಚೇತನಗಳು ಹಾಡುತ್ತವೆ, ನಲಿಯುತ್ತವೆ, ಲವಲವಿಕೆಯೇ ತಾವಾಗಿ. ನಡುಹಗಲಿನಲ್ಲಿ ಭಾವರಹಿತ ಜಡತೆಯನ್ನು ಪಡೆಯುವುದಕ್ಕಾಗಿ. ಸಂಜೆ ಮತ್ತೆ ಹೊಸ ಹುರುಪು, ತಣ್ಣನೆಯ ಹಾಡು.... ಬಿಳಿ ಮಂಜಿನಲ್ಲಿ ಕರಗುವುದಕ್ಕಾಗಿ.
ಈಗ ನನ್ನ ಮುಂಜಾವು ಕಳೆದಿದೆ. ನನ್ನ ಸಂಜೆಯನ್ನು ಆಲಂಗಿಸಲು ದಾಪುಗಾಲಿಡುತ್ತಿದ್ದೇನೆ - ನನ್ನ ಬದುಕಿಗಿಂತ ವೇಗವಾಗಿ!
----------
ಅವನು ಕೇಳಿದ : "ಏಕಾಂಗಿತನ ನಿನಗೆ ಬೇಸರವಿಲ್ಲವೆ?"
ಅವನು ಪ್ರಪಂಚದ ಸದ್ದುಗದ್ದಲಗಳಿಂದ ಬಂದವನು. ಪ್ರಕೃತಿಗೆ ಹೊಸಬ. 'ಏಕಾಂತ', 'ಏಕಾಂಗಿತನ' ಅವನಿಗೆ ಒಂದಾಗಿ ಕಾಣುತ್ತವೆ. ಅವನಿಗೆ ತಿಳಿದಿರಲಾರದು ನನ್ನೊಂದಿಗೆ 'ನಾನು' ಇದ್ದೇನೆಂದು.
ನಾನು 'ನನ್ನೊಂದಿಗೆ' ಏಕಾಂತದಲ್ಲಿದ್ದೇನೆ.
ನಾನು ನನ್ನ ಬಳಿ ಯಾರನ್ನೂ ಸುಳಿಯಲು ಬಿಡಲಾರೆ. ಏಕೆಂದರೆ ನನ್ನ ಬಳಿ ಬರುವ ಪ್ರತಿಯೊಬ್ಬನೂ 'ಒಂಟಿ'ಯಾಗಿ ಬರುತ್ತಾನೆ. ನನಗೆ ಗೊತ್ತು, ನನ್ನನ್ನು ತಿಳಿದುಕೊಳ್ಳಬಲ್ಲ, ನನ್ನೊಳಗಿನ ಹಾಡನ್ನು ಕೇಳಬಲ್ಲ 'ವ್ಯಕ್ತಿ' ಅವನೊಳಗೆ ವಾಸಿಸುತ್ತಿಲ್ಲ.
----------
೭ ಜನವರಿ, ೧೯೯೦
ಇಂದೇ ಮನೆಗೆ ಹೊರಟಿದ್ದವ ನಾನು. ನಾಳಿನ ಸತ್ಯಕ್ಕಾಗಿ ಇಂದಿನ ಶೂನ್ಯ ನನ್ನನ್ನು ನಾಳೆಗೆ ದೂಡುತ್ತಿದೆ.
ಈಗ ನಾಳೆಯಾಗಿದೆ. ಸತ್ಯವನ್ನು ಹಿಡಿದು ನೋಡುತ್ತೇನೆ; ಬೆಚ್ಚಗಿದೆ, ಕೆಂಪಾಗಿದೆ. ಬಹುಶಃ ಸತ್ಯದ ಕಣ್ಣೀರಿರಬೇಕು. ವಿಷಾದಪೂರಿತ ನಗು, ಒಂದು ಅಣಕ ಹಿಂದಿನಿಂದ ತೇಲಿ ಬಂತು. ಅದು ನಿನ್ನೆಯ ಶೂನ್ಯದ್ದು.
ಹೌದು. ನಿನ್ನೆಯೇ ಮನೆಗೆ ಹೊರಟಿದ್ದವನು ನಾನು.
----------
ಮೊದಲ ಬಾರಿಗೆ ಅವನನ್ನು ನೋಡಿದ್ದೆ. ಹೃದಯದಲ್ಲಿ ಸತ್ಯದ ಕಂದೀಲನ್ನು ಇಟ್ಟುಕೊಂಡು ಓಡಾಡುತ್ತಿದ್ದವ. ಓಡಾಡುತ್ತಲೇ ಇದ್ದ - ಜನರಿಗೆ ಪ್ರೀತಿ ಹಂಚುತ್ತಾ, ಸತ್ಯದ ಕುರಿತು ಮಾತನಾಡುತ್ತಾ. ಬಹುಶಃ ಈ ಜಗತ್ತಿಗೆ ಹೊಸಬನಿದ್ದಿರಬೇಕು.
ಎರಡನೆಯ ಬಾರಿಗೆ ಅವನನ್ನು ಕಂಡಾಗಲೂ ಓಡಾಡುತ್ತಲೇ ಇದ್ದ. ಅಥವಾ ಪರದಾಡುತ್ತಿದ್ದ. ಅವನ ಮುಖ ಕಪ್ಪಾಗಿತ್ತು, ಕತ್ತಲಗಿಂತ ತುಸು ಕಪ್ಪಾಗಿಯೇ ಇತ್ತು. ಬಹುಶಃ ಆರುತ್ತಿರುವ ತನ್ನ ಕಂದೀಲನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕಂಗೆಟ್ಟಿದ್ದಂತೆ ತೋರುತ್ತಿತ್ತು.
ನಿನ್ನೆ, ತೀರಾ ನಿನ್ನೆ, ಅವನನ್ನು ಮತ್ತೊಮ್ಮೆ ಭೇಟಿಯಾದೆ, ಸ್ಮಶಾನದಲ್ಲಿ, ಕತ್ತಲಿನಲ್ಲಿ. ಹತ್ತಿರ ಹೋದೆ. ಬಿಳಿಯ ಬೆಳಕಿನಂತೆ ಕುಳಿತಿದ್ದ. ಯಾರಿಗೂ ಕೇಳದ ಯಾವುದೋ ಹಾಡೊಂದು ಅವನ ತುಟಿಗಳಿಂದ ಹುಟ್ಟುತ್ತಿದ್ದಂತೆ ಕಾಣುತ್ತಿತ್ತು. ಕಣ್ಣುಗಳು ಅವನ ಒಳಗಿನ ಬೆಳಕನ್ನು ಬಿಂಬಿಸುತ್ತಾ ಮಾತನಾಡುತ್ತಿದ್ದವು. ಕೇಳಿದೆ: "ಗೆಳೆಯಾ, ನಿನ್ನ ವಿಚಾರವೇನು? ಅತ್ತ ಕಾಣುವ ಸುಖದ ನಗರಕ್ಕೆ ಒಟ್ಟಿಗೆ ನಡೆಯೋಣವೆ?"
ತಂಪಾದ ಗಾಳಿಯಂತೆ ಉತ್ತರ ಬಂತು: "ಓಡಾಡುವ ಹೆಣಗಳ ನಡುವಿಗೇನು? ಇಲ್ಲ ಮಿತ್ರನೇ, ನಾನಿಲ್ಲಿ ಸುಖಿ. ಏಕೆಂದರೆ ಇಲ್ಲಿ ಗೋರಿಗಳಲ್ಲಿ ಮಲಗಿರುವ ಚೇತನಗಳು ನನ್ನೊಟ್ಟಿಗಿವೆ. ಇಲ್ಲಿನ ಮರಗಳಿಗೆ ಕಂಬನಿಗಳಿವೆ."
----------
No comments:
Post a Comment